ಸಾರಾಂಶ ಕೆಮ್ಮನೆ ಮೀಸೆವೊತ್ತೆನೇ
ವ|| ದ್ರೋಣಂ ತನಗೆ ಬಡತನಮಡಸೆ ಅಶ್ವತ್ಥಾಮನನೊಡಗೊಂಡು ನಾಡಂನಾಡಂ ತೊೞಲ್ದು ಪರಶುರಾಮನಲ್ಲಿಗೆ ವಂದಂ ಅಂತು ವಲ್ಕಲಾವೃತಕಟಿತಟನುಮಾಗಿರ್ದ ಜಟಾಕಲಾಪನುಮಾಗಿ ತಪೋವನಕ್ಕೆ ಪೋಪ ಭಾರ್ಗವಂ ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನಂ ಕಂಡು ಕನಕಪಾತ್ರಕ್ಕುಪಾಯಮಿಲ್ಲಪ್ಪುದಱಂ ಮೃತ್ಪಾತ್ರದೊಳರ್ಘ್ಯಮೆತ್ತಿ ಪೂಜಿಸಿ-
ಸಾರಾಂಶ: ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನೂ ಕರೆದುಕೊಂಡು ದೇಶದೇಶಗಳಲ್ಲೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದನು. ಈಗ ನಾರುಮಡಿಯಿಂದ ಕೂಡಿದ ನಡುವನ್ನುಳ್ಳವನೂ ಜಟಾಸಮೂಹದಿಂದ ಕೂಡಿದವನೂ ಆದ ಆ ಪರಶುರಾಮನು ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ದ್ರೋಣನನ್ನು ಚಿನ್ನದ ಪಾತ್ರೆಗಳಿಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಘ್ಯವನ್ನು ಕೊಟ್ಟು ಪೂಜಿಸಿದನು.
ಚಂ|| ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂ
ದಡೆಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ
ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ
ಲ್ಲೊಡಮೆ ಸಮಂತು ಪೇೞವರೊಳಾವುದನೀವುದೊ ಕುಂಭಸಂಭವ ||೧||
ಸಾರಾಂಶ: ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು. ಭೂಮಂಡಲವನ್ನು ಗುರುಗಳಿಗೆ ಕೊಟ್ಟೆನು. ಈಗ ನನ್ನಲ್ಲಿ ಒಂದಡಕೆಯೂ ಇಲ್ಲ. ಬೇಡುವವನಾದರೋ ವೇದಪಾರಂಗತ. ಹೇಗೆ ಅವನನ್ನು ಸಂತೋಷಪಡಿಸಲಿ? ‘ಎಲೈ ದ್ರೋಣನೆ ಈಗ ಇದೊಂದು ಬಿಲ್ಲೂ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ. ಬೇರೆ ಆಸ್ತಿಯಿಲ್ಲ. ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ? ಚೆನ್ನಾಗಿ ಯೋಚಿಸಿ ಹೇಳು.
ವ|| ಎಂಬುದುಂ ದ್ರೋಣನೆನಗೆ ವಿದ್ಯಾಧನಮೆ ಧನಮಪ್ಪುದಱಂ ದಿವ್ಯಾಸ್ತ್ರಂಗಳಂ ದಯೆಗೆಯ್ವುದೆನೆ ವಾ ರಣವಾಯವ್ಯಾಗ್ನೇಯ ಪೌರಂದರಾದಿ ಪ್ರಧಾನಾಸ್ತ್ರಂಗಳಂ ಕುಡೆ ಕೊಂಡು ಪರಶುರಾಮನಂ ಬೀೞ್ಕೊಂಡು ತನ್ನೊಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳರಸುಗೆಯ್ದಪನೆಂದು ಕೇಳ್ದಾ ಪೊಱಲ್ಗೆವಂದು ದ್ರುಪದನರಮನೆಯ ಬಾಗಿಲೊಳ್ ನಿಂದು ಪಡಿಯಱನಂ ಕರೆದು ನಿಮ್ಮೊಡನಾಡಿದ ಕೆಳೆಯಂ ದ್ರೋಣನೆಂಬ ಪಾರ್ವ ಬಂದನೆಂದು ನಿಮ್ಮರಸಂಗಱಯೆ ಪೇೞೆಂಬುದುಮಾತನಾ ಮಾೞ್ಕೆಯೊಳೆ ಬಂದಱಪುವುದುಂ ದ್ರುಪದಂ ರಾಜ್ಯಮದಿರಾಮದೋನ್ಮತ್ತನುಂ ಗರ್ವಗ್ರಹವ್ಯಗ್ರಚಿತ್ತನುಮಾಗಿ ಮೇಗಿಲ್ಲದೆ-
ಸಾರಾಂಶ: ಎಂಬುದಾಗಿ ಹೇಳಲು ದ್ರೋಣನು ನನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತ್ರಗಳನ್ನು ದಯಪಾಲಿಸಬೇಕು ಎನ್ನಲು ವಾರುಣ, ವಾಯುವ್ಯ, ಆಗ್ನೇಯ, ಐಂದ್ರಾದಿ ಅಸ್ತ್ರಗಳನ್ನು ಕೊಡಲು ಅದನ್ನು ತೆಗೆದುಕೊಂಡು ಪರಶುರಾಮನಿಂದ ಅಪ್ಪಣೆ ಪಡೆದು ತನ್ನ ಒಡನಾಡಿಯೂ ಸ್ನೇಹಿತನೂ ಆದ ದ್ರುಪದನು ಛತ್ರಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆಂದು ಕೇಳಿ ಆ ಪಟ್ಟಣಕ್ಕೆ ಬಂದು ದ್ರುಪದನರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮ ಜೊತೆಯಲ್ಲಾಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಎಂದನು. ಅವನು ಆ ರೀತಿಯಲ್ಲಿಯೇ ಬಂದು ತಿಳಿಸಲಾಗಿ ದ್ರುಪದನು ರಾಜ್ಯವೆಂಬ ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತನಾದ ಮನಸ್ಸುಳ್ಳವನೂ ಆಗಿ ಒಳ್ಳೆಯ ನಡತೆಯಿಲ್ಲದೆ
ಕಂ|| ಅಂತೆಂಬನಾರ್ಗೆ ಪಿರಿದುಂ
ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ
ೞೆಂತೆನಗೆ ಕೆಳೆಯನೇ ನೂಂ
ಕಂತಪ್ಪನನಱಯೆನೆಂದು ಸಭೆಯೊಳ್ ನುಡಿದಂ ||೨||
ವ || ಅಂತು ನುಡಿದುದಂ ಪಡಿಯಱಂ ಬಂದಾಮಾೞ್ಕೆಯೊಳಱಪೆ ದ್ರೋಣನೊತ್ತಂಬರದಿಂದೊಳಗಂ ಪೊಕ್ಕು ದ್ರುಪದನಂ ಕಂಡು-
ಸಾರಾಂಶ: ‘ಹಾಗೆನ್ನುವವನು ಯಾರ ಸಂಬಂ? ಇದು ವಿಶೇಷ ಭ್ರಮೆಯಲ್ಲವೆ? ದ್ರೋಣನೆಂಬುವವನು ಬ್ರಾಹ್ಮಣನೇ ಹೇಗೆ? ನನಗೆ ಸ್ನೇಹಿತನೇ ಹೇಳು? ಅಂತಹವನನ್ನು ನಾನು ತಿಳಿದಿಲ್ಲ ; ಅವನನ್ನು ಹೊರಕ್ಕೆ ತಳುಘಿ’ಈಆ’ ಎಂದು ಸಭಾಮಧ್ಯದಲ್ಲಿ ಕೆಟ್ಟಮಾತನಾಡಿದನು.
ವ|| ಹಾಗೆ ಹೇಳಿದುದನ್ನು ದ್ವಾರಪಾಲಕನು ಬಂದು ಆ ರೀತಿಯಲ್ಲಿ ತಿಳಿಸಲಾಗಿ ದ್ರೋಣನು ಬಲಾತ್ಕಾರದಿಂದ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ
ಚಂ|| ಅಱಯಿರೆ ನೀಮುಮಾಮುಮೊಡನೋದಿದೆವೆಂಬುದನಣ್ಣ ನಿನ್ನ ನಾ
ನಱಯೆನದೆಲ್ಲಿ ಕಂಡೆಯೊ ಮಹೀಪತಿಗಂ ದ್ವಿಜವಂಶಜಂಗಮೇ
ತಱ ಕೆಳೆಯಿಂತು ನಾಣಿಲಿಗರಪ್ಪರೆ ಮಾನಸರೆಂಬ ಮಾತುಗಳ್
ನೆಱೆಗೊಳೆ ಕುಂಭಸಂಭವನನಾ ದ್ರುಪದಂ ಕಡುಸಿಗ್ಗು ಮಾಡಿದಂ ||೩||
ವ || ಅಂತು ಮಾಡಿದುದುಮಲ್ಲದೀ ನಾಣಿಲಿ ಪಾರ್ವನನೆಱೆದು ಕಳೆಯಿಮೆಂಬುದುಂ ದ್ರೋಣನಿಂತೆಂದಂ-
ಸಾರಾಂಶ: ‘ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ’ ಎನ್ನಲು ದ್ರುಪದನು ನಿನ್ನನ್ನು ನಾನು ತಿಳಿದಿಲ್ಲ (ನೀನು ನನಗೆ ಅಪರಿಚಿತನು) ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕ ವಾಗುವಂತೆ ಹೀಯ್ಯಾಳಿಸಿದನು.
ವ|| ಹಾಗೆ ಮಾಡಿದುದೂ ಅಲ್ಲದೆ ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ನೂಕು ಎನ್ನಲು ದ್ರೋಣನು ಹೀಗೆಂದನು-
ಚಂ|| ನುಡಿ ತಡವಪ್ಪುದೊಂದು ಮೊಗದೊಳ್ ಮಱುಕಂ ದೊರೆಕೊಳ್ವುದೊಂದು ನಾ
ಣ್ಗೆಡೆಗುಡದಿರ್ಪುದೊಂದು ನುಡಿಗಳ್ ಮೊಱೆಯಂ ಮಱೆಯಿಪ್ಪುದೊಂದು ಕ
ಳ್ಗುಡಿದವರಂದಮಿಂತು ಸಿರಿ ಸಾರ್ತರೆ ಸಾರ್ವುದದರ್ಕೆ ಸಂದೆಯಂ
ಬಡದೆ ಜಲಕ್ಕನೀಗಳಱದೆಂ ಸಿರಿ ಕಳ್ಳೊಡವುಟ್ಟಿತೆಂಬುದಂ ||೪||
ವ || ಎಂದು ಸೈರಿಸದೆ-
ಸಾರಾಂಶ: ಐಶ್ವರ್ಯ ಬರಲು ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು; ಮುಖದಲ್ಲಿ ವಕ್ರಚೇಷ್ಟೆಯುಂಟಾಗುವುದು; ಮಾತುಗಳು ನಾಚಿಕೆಯಿಲ್ಲದಾಗುವುವು; ಸಂಬಂಧವನ್ನು ಮರೆಯುವಂತೆ ಮಾಡುವುದು; ಆದುದರಿಂದ ಐಶ್ವರ್ಯವು ಕಳ್ಳಿನೊಡನೆ ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಿದೆನು’ ವ|| ಎಂದು ಹೇಳಿ ಸಹಿಸಲಾರದೆ.
ಚಂ|| ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ
ದಳವೊಡನೋದಿದೊಂದು ಬೆಱಗಿಂಗೆ ಕೊಲಲ್ಕೆನಗಾಗದೀ ಸಭಾ
ವಳಯದೊಳೆನ್ನನೇೞಸಿದ ನಿನ್ನನನಾಕುಳಮೆನ್ನ ಚಟ್ಟರಿಂ
ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ ||೫||
ಸಾರಾಂಶ: ‘ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು’ ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ?