ಕೃತಿಕಾರರ ಪರಿಚಯ :
ಬಾಗಲೋಡಿ ದೇವರಾಯ
ಬಾಗಲೋಡಿ ದೇವರಾಯ ಅವರು ಕ್ರಿ.ಶ. ೧೯೨೭ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು . ಅವರ ಕಥಾಸಂಗ್ರಹಗಳೆಂದರೆ ಹುಚ್ಚು ಮುನಸೀಫ ಮತ್ತು ಇತರ ಕತೆಗಳು , ಆರಾಧನಾ , ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು , ಬಾಗಲೋಡಿ ದೇವರಾಯ ಅವರು ಒಟ್ಟು ೨೬ ಕತೆಗಳನ್ನು ಬರೆದಿದ್ದಾರೆ . ಇವರು ೧೯೮೫ ರಲ್ಲಿ ನಿಧನರಾದರು . ಮಗ್ಗದ ಸಾಹೇಬ ಕಥೆಯನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆರಿಸಿಕೊಳ್ಳಲಾಗಿದೆ .
Maggada Saheba Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1 ) ರಹೀಮ್ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು ?
ಉತ್ತರ : ರಹೀಮ ಮಗ್ಗವನ್ನು ಮುಟ್ಟದೆ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಾಗಿತ್ತು .
2 ) ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು ?
ಉತ್ತರ : ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ .
3 ) ಅಬ್ದುಲ್ ರಹೀಮನ ಹಠವೇನು ?
ಉತ್ತರ : ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಭ್ಯಾಸ ಕೊಡಿಸಿ ಸರಕಾರಿ ನೌಕರರನ್ನಾಗಿ ಮಾಡಬೇಕು ಅಬ್ದುಲ್ ರಹೀಮನ ಹಠವಾಗಿತ್ತು .
4 ) ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ ?
ಉತ್ತರ : ತಂದೆಯ ಆಸೆಯಂತೆ ಒಬ್ಬ ಮಗ ಸರಕಾರಿ ಕಚೇರಿಯಲ್ಲಿ ಗುಮಾಸ್ತನಾದ . ಇನ್ನೊಬ್ಬ ಪೋಸ್ಟ್ ಮಾಸ್ತರನಾದ .
5 ) ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ ?
ಉತ್ತರ : ರಹೀಮನು ತನ್ನ ಮಗನಿಗೆ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1 ) ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು ?
ಉತ್ತರ : ಅಂಗಡಿಯಿಂದ ಲಡ್ಡುಗಳನ್ನು ಕೊಂಡು ಕೊಟ್ಟುದಕ್ಕೆ ಅತಿಥಿಗಳಿಗೆ ಬಹಳ ಸಿಟ್ಟು ಬಂತು . ಅವರು ‘ ರಾಯರೆ , ಅಂಗಡಿಯಿಂದ ತೆಗೆದುಕೊಳ್ಳಲು ನಮ್ಮಲ್ಲಿ ಹಣವಿಲ್ಲವೆ ? ಮನೆಯಲ್ಲಿ ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೂ ಕಲ್ಲುಸಕ್ಕರೆ ಹರಳನ್ನೋ ಕೊಡಿ . ನಿಮ್ಮ ಹಬ್ಬದ ಪೂಜೆಯ ಪ್ರಸಾದವನ್ನು ನಾವು ತೆಗೆದುಕೊಳ್ಳುವುದು ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ , ಅಂಗಡಿಯ ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯೇ ? ‘ ಎಂದು ಆಕ್ಷೇಪಿಸಿದರು .
2 ) ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ ,
ಉತ್ತರ : ಸಾಹೇಬ್ ಬಹಾದ್ದೂರ್ ಮಗ್ಗದ ಹುಸೇನ್ ಸಾಹೇಬರು ಜನಪ್ರಿಯ ಮತ್ತು ಧನವಂತ ವ್ಯಕ್ತಿಯಾಗಿದ್ದರು . ಅವರು ಮಸೀದಿ ಮಾತ್ರವಲ್ಲ : ದೇವಸ್ಥಾನವನ್ನೂ ಕಟ್ಟಿಸಿದ್ದರು .
3 ) ಶಾಲಾ ವಾರ್ಷಿಕೋತ್ಸವದಂದು ಕರೀಮ್ ಮಾಡಿದ ಕೆಲಸವೇನು ?
ಉತ್ತರ : ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು . ಅದರಲ್ಲಿ ಕರೀಮನದು ಸ್ತ್ರೀಪಾತ್ರ , ಅದಕ್ಕಾಗಿ ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ಪಡೆದುಕೊಂಡ . ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ . ಎಲ್ಲೋ ಮಾಯವಾಗಿ ಹೋದ .
4 ) ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು ?
ಉತ್ತರ : ಲೇಖಕರ ಹುಟ್ಟೂರಿನ ಪಕ್ಕದಲ್ಲಿ ಮುಸಲ್ಮಾನರ ವಸತಿ ಇದೆ . ಅದರೊಳಗೆ ಒಂದು ಪವಿತ್ರ ಸ್ಥಾನವಿದೆ . ಅಲ್ಲಿ ಉರ್ಸ್ ‘ ಎಂಬ ಮುಸಲ್ಮಾನರ ಧಾರ್ಮಿಕ ಉತ್ಸವದ ಕಾಲದಲ್ಲಿ ನಮ್ಮ ಮನೆತನದ ಒಬ್ಬ ಪ್ರತಿನಿಧಿ ಇದ್ದೇ ಇರಬೇಕೆಂಬ ಸಂಪ್ರದಾಯ ಇತ್ತು .
5 ) ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೋಜನವೇನು ?
ಉತ್ತರ : ಕರೀಮ್ ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿದ್ದ . ಅದನ್ನು ಶಂಕರಪ್ಪ ಅವರು ಪಶಂಸೆ ಮಾಡಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು . ಅದರ ಫಲಸ್ವರೂಪವಾಗಿ ಸರಕಾರದಿಂದ ಅವನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ದೊರೆಯಿತು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .
1 ) ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕಾಗಿ ಬಂದ ಪ್ರಸಂಗವನ್ನು ತಿಳಿಸಿ .
ಉತ್ತರ : ಕರೀಮನು ಶಂಕರಪ್ಪ ಅವರ ಮನೆಗೆ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಂಡನು . ಆಗ ಅಲ್ಲಿಗೆ ಹೋಗಿ ಶಂಕರಪ್ಪ ಅವರು ರಹೀಮನೊಡನೆ ಒಂದು ಗಂಟೆ ಗೋಗರೆದರು . ನಿವೇದಿಸಿದರು . ತರ್ಕಿಸಿದರು . ಚರ್ಚಿಸಿದರು . ಆದರೆ ರಹೀಮ ಒಂದು ಪದವನ್ನೂ ತಾಳ್ಮೆಯಿಂದ ಕೇಳಲಿಲ್ಲ . “ ಸಾಹೇಬ್ ಬಹಾದ್ದೂರ್ ಹುಸೇನ್ ಸಾಹೇಬರ ಕೀರ್ತಿಗೆ ಮಸಿಹಚ್ಚಿದ್ದಾನೆ . ನೀವು ಕಲಿಸಿದ ಪಾಠದಿಂದಲೇ ಈ ಪಠಮಾರಿ ನಮ್ಮ ವಂಶದ ಕೀರ್ತಿಯನ್ನು ಮಣ್ಣುಪಾಲು ಮಾಡಿದ . ಹಣ ತಂದಿದ್ದಾನಂತೆ , ಕಳವಿನ ಹಣವೋ ದರೋಡೆಯ ಹಣವೋ ? ‘ ಎಂದು ಸಿಡುಕಿದ . ಶಂಕರಪ್ಪ ಅವರು ಮುಖಬಾಡಿಸಿಕೊಂಡು ಹಿಂತೆರಳಿದರು .
2 ) ನವೀನ ಶಿಕ್ಷಣದ ವೈಶಿಷ್ಟ್ಯಗಳೇನು ?
ಉತ್ತರ : ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ‘ ನವೀನ ಶಿಕ್ಷಣ ‘ ಆರಂಭವಾಯಿತು . ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು , ಅವರಲ್ಲಿ ಹಸ್ತಕೌಶಲವನ್ನು , ದೇಹಶಮದಲ್ಲಿ ಗೌರವ – ಭಾವವನ್ನು ಉಂಟು ಮಾಡುವುದು ಒಂದು ಭಾಗವಾಗಿತ್ತು . ಕೆಲವರಿಗೆ ಬಡಗಿಯ ಕೆಲಸ , ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ ಸಾಮಗ್ರಿಗಳನ್ನು ಮಾಡುವ , ಕೆಲವರಿಗೆ ಕೃಷಿ , ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸಲಾಗುತ್ತಿತ್ತು.
ಈ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1 ) ಕರೀಮ ಧನವಂತನಾದ ಬಗೆ ಹೇಗೆ ? ವಿವರಿಸಿ .
ಉತ್ತರ : ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ‘ ನವೀನ ಶಿಕ್ಷಣ ‘ ಆರಂಭವಾಯಿತು . ಆ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು , ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸತೊಡಗಿದ್ದರು . ಹುಡುಗ ಕರೀಮ್ ಮಗ್ಗದ ಕೆಲಸವನ್ನು ಮೀನು ನೀರಿನಲ್ಲಿ ಈಜುವಷ್ಟೇ ಸುಲಭವಾಗಿ ಕಲಿತು ಬಹು ನಿಮಣನಾಗಿಬಿಟ್ಟ . ಕರೀಮ್ ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ . ಅದರ ಫಲಸ್ವರೂಪವಾಗಿ ಸರಕಾರದಿಂದ ಅವನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದವು . ತಂದೆ ಅವನ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು . ಒಂದು ದಿನ ಶಾಲೆಯ ವಾರ್ಷಿಕೋತ್ಸವದಲ್ಲಿ ನಾಟಕವಿತ್ತು . ಅದರಲ್ಲಿ ಕರೀಮನದು ಸ್ತ್ರೀಪಾತ್ರ . ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ತೆಗೆದುಕೊಂಡ . ಆದರೆ ನಾಟಕ ಮುಗಿದ ಎಲ್ಲೋ ಮಾಯವಾಗಿ ಹೋದ . ಸಣ್ಣಪ್ರಾಯದಲ್ಲೇ ಮಗ್ಗದ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ ಅವನೀಗ ಅದರ ಅಧ್ಯಕ್ಷನಾಗಿ ಸಾಕಷ್ಟು ಯಶಸ್ವಿಯೂ ಧನವಂತನೂ ಆದನು . ಅದೂ ಅಲ್ಲದೆ ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸ ಹೊಸ ಸುಧಾರಣೆಗಳನ್ನೂ ಪರಿವರ್ತನೆಗಳನ್ನೂ ತಂದು ಹೆಸರು ಮಾಡಿದನು .
2 ) ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು ?
ಅಬ್ದುಲ್ ರಹೀಮನಿಗೆ ‘ ಮಗ್ಗದ ಸಾಹೇಬ ‘ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು . “ ಅನಿಷ್ಟ ಮಗ್ಗದ ಹೆಸರೆತ್ತಬೇಡಿ ” – “ ಮಗ್ಗವಲ್ಲ ಕೊರಳಿಗೆ ಹಗ್ಗ ! ” ಎಂದು ರೋಷದಿಂದ ಹೇಳುತ್ತಿದ್ದನು . ಏಕೆಂದರೆ ಅವನ ಅಜ್ಜನ ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು . ಅವೇನೋ ನಿಜಕ್ಕೂ ನಿಕೃಷ್ಣ ವಸ್ತುಗಳು , ಒಂದು ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುತ್ತಿದ್ದವು . ಒಂದೇ ತಿಂಗಳಲ್ಲಿ ಬಣ್ಣ ವಿವರ್ಣವಾಗಿ ಎರಡೇ ತಿಂಗಳಲ್ಲಿ ಮಾಯವಾಗುತ್ತಿತ್ತು . ಆದರೆ ಜನರಿಗೆ ಬೇಕಾದುದು ಅಗ್ಗದ ವಸ್ತು . ಆದ್ದರಿಂದ ಅಗ್ಗದ ಮಾಲಿನದೇ ಅಧಿಪತ್ಯವಾಯಿತು . ಮಗ್ಗದವರು ಭಿಕಾರಿಗಳಾದರು . ಅವರ ಅನ್ನಕ್ಕೆ ಸಂಚಕಾರವಾಯಿತು . ಇದರಿಂದ ಅಬ್ದುಲ್ ರಹೀಮನಿಗೆ ಬಹಳ ಕಷ್ಟವಾಯಿತು . ಅವನ ಮಗ್ಗಗಳೆಲ್ಲಾ ಧೂಳು ತುಂಬಿ ಜೇಡನ ಬಲೆಗಳಿಂದ ಹಾಳುಬಿದ್ದವು . ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಯಿತು . ಆದ್ದರಿಂದ ಅವನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಯಿತು .
ಉ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1 ) “ ಮಗ್ಗವಲ್ಲ ಕೊರಳಿಗೆ ಹಗ್ಗ ! ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಸಿಟ್ಟುಬರುತ್ತಿತ್ತು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ . ರಹೀಮನಿಗೆ ಮಗ್ಗವೆಂದರೆ ದ್ವೇಷ , ಅವನನ್ನು ಮಗ್ಗದ ಸಾಹೇಬ ಎಂದು ಕರೆದರೆ ಅವನು ಕೋಪದಿಂದ “ ಅನಿಷ್ಟ ಮಗ್ಗದ ಹೆಸರೆತ್ತಬೇಡಿ ” – “ ಮಗ್ಗವಲ್ಲ ಕೊರಳಿಗೆ ಹಗ್ಗ ! ” ಎಂದು ರೋಷದಿಂದ ಹೇಳುತ್ತಿದ್ದನು .
ಸ್ವಾರಸ್ಯ : ಬ್ರಿಟಿಷರ ವಿಲಾಯಿತಿ ಮಿಲ್ಲಿನ ಬಟ್ಟೆಗಳಿಂದಾಗಿ ಕೈಮಗ್ಗದ ಬಟ್ಟೆಗಳು ಬೆಲೆಕಳೆದುಕೊಂಡದ್ದರಿಂದ ಅವನು ಮಗ್ಗದ ಬಗ್ಗೆ ಸಿಟ್ಟಾಗಿರುವುದು ಇಲ್ಲಿ ಸ್ವಾರಸ್ಯವಾಗಿದೆ .
2 ) “ ಕಳ್ಳನಾದವನು , ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕರೀಮನು ನಾಟಕದಲ್ಲಿ ಅಲಂಕಾರ ಮಾಡಿಕೊಳ್ಳಲೆಂದು ತಾಯಿಯಿಂದ ಹಳೆಕಾಲದ ಒಂದು ಚಿನ್ನದ ಸರವನ್ನು ತೆಗೆದುಕೊಂಡಿದ್ದನು . ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ . ಎಲ್ಲೋ ಮಾಯವಾಗಿ ಹೋದ . ಆ ಸಂದರ್ಭದಲ್ಲಿ ಕೋಪಗೊಂಡ ಆತನ ತಂದೆ ರಹೀಮನು ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ರಹೀಮನ ಹಠ , ಮಗನ ನಡವಳಿಕೆಯ ಬಗ್ಗೆ ಆತನಿಗಿದ್ದ ಕೋಪ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .
3 ) “ ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕರೀಮನು ಹತ್ತು ಸಾವಿರ ರೂಪಾಯಿ ಮತ್ತು ತಾಯಿಯ ಸರದೊಂದಿಗೆ ಮನೆಗೆ ಬಂದಾಗ ಆತನ ತಂದೆ ಅವನನ್ನು ಮನೆಗೆ ಸೇರಿಸದೆ ಬಾಗಿಲು ಮುಚ್ಚಿದನು . ಆಗ ಕರೀಮನು ಶಂಕರಪ್ಪ ಮಾಸ್ತರರ ಬಳಿ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಳ್ಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ಇಲ್ಲಿ ಕರೀಮನ ಸಾಧನೆ , ತಂದೆ – ತಾಯಿಯ ಮೇಲೆ ಇಟ್ಟಿದ್ದ ಪ್ರೀತಿ , ಮುಖ್ಯೋಪಾಧ್ಯಾಯರಲ್ಲಿ ಆತನು ವಿನಂತಿಸಿಕೊಳ್ಳುವ ರೀತಿ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .
4 ) ” ದೇವರು ದೊಡ್ಡವನು ದೇವರು ದಯಾಳು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : “ ನಿಮ್ಮ ಮಗ ಕರೀಮ್‌ನಿಗೆ ರಾಷ್ಟ್ರಪತಿ ಅವರು ಪದ್ಮಭೂಷಣ ಬಿರುದನ್ನು ಕೊಟ್ಟಿದ್ದಾರೆ . ಆ ವಿಷಯ ಪತ್ರಿಕೆಯಲ್ಲಿ ಬಂದಿದೆ ಎಂದು ಶಂಕರಪ್ಪ ಅವರು ಮುದುಕನಾಗಿದ್ದ ರಹೀಮನಿಗೆ ಹೇಳಿದಾಗ ರಹೀಮನು ಸಂತೋಷದಿಂದ ಹೆಮ್ಮೆಪಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ತನ್ನ ಮಗ ಕರೀಮನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದ ರಹೀಮನಿಗೆ ತನ್ನ ಮಗನ ಸಾಧನೆಯನ್ನು ಕೇಳಿ ಅವನ ಬಗ್ಗೆ ಹೆಮ್ಮೆಯ ಭಾವನೆ ಮೂಡಿದ್ದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿದೆ .
ಊ ] ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ .
1 ) ಅಬ್ದುಲ್ ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು .
2 ) ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಗಿದೆ .
3 ) ಹುಡುಗನ ಉತ್ಸಾಹ ಆಕಾಶಕ್ಕೇರಿತು .
4 ) ಶಂಕರಪ್ಪ ಅವರು ಮುಖ ಬಾಡಿಸಿಕೊಂಡು ಹಿಂತೆರಳಿದರು .
5 ) ನನಗೆ ಎರಡೇ ಮಕ್ಕಳು ಕಳ್ಳರ ಪರಿಚಯ ನನಗಿಲ್ಲ .