9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes

 9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes Question Answer Pdf Download, 9th ಕನ್ನಡ ನಾಡು ನುಡಿ Notes

ತರಗತಿ : 9ನೇ ತರಗತಿ

ಪದ್ಯದ ಹೆಸರು : ಕನ್ನಡ ನಾಡು ನುಡಿ

ಕವಿ ಪರಿಚಯ :

ಶ್ರೀವಿಜಯ :

ಈತನ ಕಾಲ : ಕ್ರಿ.ಶ. ಸುಮಾರು ೯ ನೆಯ ಶತಮಾನ ಆಶ್ರಯದಾತ : ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂ ಈತನ ಕೃತಿ ‘ ಕವಿರಾಜಮಾರ್ಗ ‘ ಎಂಬ ಲಕ್ಷಣ ಗ್ರಂಥ ಇದು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೃತಿಯಾಗಿದೆ . ನಯಸೇನ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ ಸ್ಥಳ : ಧಾರವಾಡ ಜಿಲ್ಲೆಯ ಮುಳುಗುಂದ , ಈತನ ಪ್ರಮುಖ ಕೃತಿ : ‘ ಧರ್ಮಾಮೃತ ‘ ಎ ೦ ಬ ಚಂಪೂ ಕಾವ್ಯ * ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ವಿರೋಧ ವ್ಯಕ್ತಪಡಿಸುತ್ತಾನೆ . ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಆಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ . ನೇಮಿಚಂದ್ರ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ .

* ಈತನ ಕೃತಿಗಳು : ‘ ಲೀಲಾವತೀ ಪ್ರಬಂಧ ‘ ಹಾಗೂ ‘ ಅರ್ಧನೇಮಿ ಪುರಾಣ ‘ * ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ . ಮಹಲಿಂಗರಂಗ : ಈತನ ಕಾಲ : ಕ್ರಿ.ಶ. ಸುಮಾರು ೧೭ ನೆಯ ಶತಮಾನ.

* ಇವನ ನಿಜನಾಮ : ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .

* ಈತನ ಆರಾಧ್ಯ ದೈವ : ಶ್ರೀಶೈಲ ಮಲ್ಲಿಕಾರ್ಜುನ .

* ಈತನ ಪ್ರಮುಖ ಕೃತಿ : ‘ ಅನುಭವಾಮೃತ ‘ ಇದು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ ಆಂಡಯ್ಯ : ಈತನ ಕಾಲ : ಕ್ರಿ.ಶ. ಸುಮಾರು ೧೩ ನೇ ಶತಮಾನ . * ಆಶ್ರಯದಾತ : ಕದಂಬರ ದೊರೆ ಕಾಮದೇವ , * ಇವನ ಪ್ರಮುಖ ಕೃತಿ : ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯ

* ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ . ಸಂಸ್ಕೃತದ ಸಹಾಯವನ್ನು ಪಡೆಯದೆ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ . ‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಪದ್ಯಗಳನ್ನು ಬಿ.ಎಂ.ಶ್ರೀ . ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .

9th Standard Kannada Nadu Nudi Poem Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?

ಉತ್ತರ : ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಕನ್ನಡ .

2. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?

ಉತ್ತರ : ಪದನರಿದು ನುಡಿಯುವವರು ನಾಡವರ್ಗಳು ( ಸಾಮಾನ್ಯ ಜನರು ) ಎಂದು ಕವಿ ಹೇಳಿದ್ದಾನೆ .

3.ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?

ಉತ್ತರ : ತುಪ್ಪದೊಡನೆ ಎಣ್ಣೆಯನ್ನು ಬೆರೆಸಬಾರದು .

ಆ ] ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .

1. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?

ಉತ್ತರ : ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ರಾಮಾಯಣದಲ್ಲಿ ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ , ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ . ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ . ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು : ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು ; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು : ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ .

2. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?

ಉತ್ತರ : ಮಹಲಿಂಗರಂಗನು ಕನ್ನಡ ಭಾಷೆಯ ಬಗ್ಗೆ ವರ್ಣಿಸುತ್ತಾ “ ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿರುವ , ಸುಲಲಿತವಾಗಿರುವ ಕನ್ನಡ ಭಾಷೆಯನ್ನು ಅರಿತು , ಮೋಕ್ಷವನ್ನು ಗಳಿಸಿಕೊಂಡರೆ ಸಾಲದೇ ? ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಪತ್ನಿಸುತ್ತಾನೆ . ಮುಕ್ತಿ ಪಡೆಯಲು ಕನ್ನಡದಲ್ಲೇ ದೇವರನ್ನು ಸ್ತುತಿಸಿ ಮುಕ್ತಿ ಪಡೆಯಬಹುದಲ್ಲವೇ ? ಸಂಸ್ಕೃತ ಭಾಷೆಯಷ್ಟೇ ಶಕ್ತಿ ಕನ್ನಡ ಭಾಷೆಗೂ ಇದೆ ಎಂದು ಕವಿ ಅಭಿಪ್ರಾಯಪಟ್ಟಿದ್ದಾನೆ .

3. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?

ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು . ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು . ಈ ಸಾಮಾನ್ಯ ಜನರು ನಿಜವಾಗಿಯು ಚತುರರು , ಅವರು ಶಿಕ್ಷಣವನ್ನು ಪಡೆಯದಿದ್ದರು . ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ .

4. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?

ಉತ್ತರ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು ; ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ .

5. ಕನ್ನಡ ನಾಡಿನ ಪ್ರಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ? ಅಥವಾ ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?

ಉತ್ತರ : ಆಂಡಯ್ಯ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ , ಕೆಂಪಾದ ತೆಂಗು ಅಲ್ಲದೆ , ನಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸುತ್ತಾನೆ . ಕನ್ನಡ ನಾಡಿನಲ್ಲಿ ಉತ್ತಮ ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ .

ಇ ] ಕೆಳಗಿನ ಪ್ರಶ್ನೆಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ .

1. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?

ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಸಾಮಾನ್ಯ ಜನರು ನಿಜವಾಗಿಯು ಚತುರರು . ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ವರ್ಣಿಸಿದ್ದಾನೆ . ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು . ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು . ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು . ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ . ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು : ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು : ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಎಂದು ಹೇಳುತ್ತಾ ಅಚ್ಚಗನ್ನಡದ ಪರ ದನಿ ಎತ್ತಿದ್ದಾನೆ . ಮಹಲಿಂಗರಂಗನು ಕನ್ನಡ ಭಾಷೆಯ ಸರಳತೆ , ಮಧುರತೆ , ಶಕ್ತಿಯ ಬಗ್ಗೆ ವರ್ಣಿಸುತ್ತಾ ” ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿದ್ದು , ಅದರಲ್ಲೇ ಮೋಕ್ಷವನ್ನು ಗಳಿಸಬಹುದು ; ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಕನ್ನಡ ಭಾಷೆಯ ಸತ್ವವನ್ನು ಅಭಿಮಾನದಿಂದ ಹೇಳಿಕೊಂಡಿದ್ದಾನೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನೇಮಿಚಂದ್ರನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿಗಳ ಕವಿತಾ ಸಾಮರ್ಥ್ಯವನ್ನು ವರ್ಣಿಸುವ ಸಂದರ್ಭದಲ್ಲಿ ನೇಮಿಚಂದನು ಈ ಮಾತನ್ನು ಹೇಳಿದ್ದಾನೆ . ಪ್ರಸಿದ್ಧ ಕಾವ್ಯಗಳಲ್ಲಿ ಬರುವ ಘಟನೆಗಳು ನಡೆದವೋ ಇಲ್ಲವೋ ಆದರೆ ಅವನ್ನು ಕವಿಗಳು ತಮ್ಮ ಕಾವ್ಯಗಳ ಮೂಲಕ ಸಾಧ್ಯವಾಗಿಸಿದ್ದಾರೆ ಎಂದು ಕವಿ ಅಭಿಪ್ರಾಯ ಪಟ್ಟಿದ್ದಾನೆ .

ಸ್ವಾರಸ್ಯ : ‘ ರವಿ ಕಾಣದ್ದನ್ನು ಕವಿ ಕಂಡ ‘ ಎಂಬ ಲೋಕೋಕ್ತಿಯನ್ನು ನೇಮಿಚಂದ್ರನು ಇಲ್ಲಿ ಸ್ವಾರಸ್ಯಕರವಾಗಿ ಸಮರ್ಥಿಸಿದ್ದಾನೆ .

2. ಕಳೆದ ಸಿಗುರಿನ ಕಬ್ಬಿನಂದದಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಮಹಲಿಂಗರಂಗನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕನ್ನಡ ಭಾಷೆಯ ಸರಳತೆ ಮತ್ತು ಅದರ ಶಕ್ತಿಯನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ತಣ್ಣಗಿನ ಹಾಲಿನಂತೆ , ಸಿಗುರಿಲ್ಲದ ಕಬ್ಬಿನಂತೆ , ಸುಲಿದ ಬಾಳೆಯ ಹಣ್ಣಿನಂತೆ ಕನ್ನಡ ಸುಲಭ ಮತ್ತು ರುಚಿಕರವೆಂದಿದ್ದಾನೆ . ಸ್ವಾರಸ್ಯ : ಕನ್ನಡ ಭಾಷೆಯ ಸರಳ ಸುಂದರತೆಯನ್ನೂ ಮುಕ್ತಿಗಾಗಿ ಕನ್ನಡವೇ ಲೇಸೆಂಬುದನ್ನೂ ಕವಿ ಸ್ವಾರಸ್ಯಕರವಾಗಿ ಹೇಳಿದ್ದಾನೆ .

ಸ್ವಾರಸ್ಯ : ಸಂಸ್ಕೃತ ಭಾಷೆಯ ಪ್ರಭಾವಕ್ಕೆ ಸಿಕ್ಕಿ ನಾಶವಾಗುತ್ತಿದ್ದ ಅಚ್ಚ ಕನ್ನಡ ಭಾಷೆಯನ್ನು ಸಂರಕ್ಷಿಸಲು ನಯಸೇನ ಕವಿ , ದನಿ ಎತ್ತಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ .

3. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಶ್ರೀವಿಜಯ ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿರಾಜಮಾರ್ಗದಲ್ಲಿ ಶ್ರೀವಿಜಯನು ಕನ್ನಡನಾಡಿನ ಶ್ರೀಸಾಮಾನ್ಯರೂ ಸಹ ಹೇಗೆ ಕಾವ್ಯ ರಚನಾ ಶಕ್ತಿಯನ್ನು ಹೊಂದಿದ್ದರೆಂಬುದನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಕನ್ನಡ ನಾಡಿನ ಸಾಮಾನ್ಯಜನರು ಓದು – ಬರೆಹ ಕಲಿಯದಿದ್ದರೂ ಕಾವ್ಯ ಪ್ರಯೋಗಮಾಡುವುದರಲ್ಲಿ ಪರಿಣಿತರಾಗಿದ್ದರು ಎಂದು ಕವಿ ಹೇಳಿದ್ದಾನೆ .

ಸ್ವಾರಸ್ಯ : ಇಲ್ಲಿ ಕನ್ನಡ ನಾಡಿನ ಜನಪದರ ಕವಿತಾ ಸಾಮರ್ಥ್ಯವನ್ನು ಕುರಿತು ಕವಿ ಹೆಮ್ಮೆಯಿಂದ ಹೊಗಳಿರುವುದು ಸ್ವಾರಸ್ಯಕರವಾಗಿದೆ .

4. ತಕ್ಕುದೆ ಬೆರೆಸ ಧೃತಮುಮಂ ತೈಲಮುಮಂ ,

ಆಯ್ಕೆ : ಈ ವಾಕ್ಯವನ್ನು ‘ ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನಯಸೇನನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು . ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ಈ ಸಂದರ್ಭದಲ್ಲಿ ಹೇಳಿದ್ದಾನೆ .

5. ದಾಳಿಂಬಮಲ್ಲದೊಪ್ಪುವ ಚೆಂದೆಂಗಲ್ಲದೆ .

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಆಂಡಯ್ಯನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಆಂಡಯ್ಯ ಕವಿ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ “ ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ : ಕೆಂಪಾದ ತೆಂಗು ಅಲ್ಲದೆ , ಮಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸಿದ್ದಾನೆ .

ಸ್ವಾರಸ್ಯ : ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಇದು ಸೂಚಿಸುತ್ತದೆ .

No comments: